ಮರಳು
ಒಂದಕ್ಕೊಂದು ಅಂಟಿಕೊಳ್ಳದೆ ಇರುವ, ವ್ಯಾಸದಲ್ಲಿ 0.0625 ಮಿಮೀ ನಿಂದ 2.0 ಮಿಮೀಗಳಿಗೆ ಮೀರದ, ಬರಿಯ ಕಣ್ಣಿಗೆ ವ್ಯತ್ಯಾಸ ಕಂಡುಬರುವ ಖನಿಜ ಮತ್ತು ಕಲ್ಲು ಕಣಗಳ ಸಮಷ್ಟಿ (ಸ್ಯಾಂಡ್). ಕಣಗಳ ವ್ಯಾಸ ಮತ್ತು ಗಾತ್ರವನ್ನು ಅನುಸರಿಸಿ ಅತಿ ದಪ್ಪ ಮರಳು, ದಪ್ಪ ಮರಳು, ಸಾಧಾರಣ ಮರಳು ಸಣ್ಣ ಅಥವಾ ನವುರು ಮರಳು ಇತ್ಯಾದಿ ವರ್ಗೀಕರಿಸಲಾಗಿದೆ. ಮರಳು, ಪ್ರಕೃತಿಯಲ್ಲಿ ಶಿಲೆಗಳ ಮೇಲೆ ಆಗುವ ಭೌತ ಮತ್ತು ರಾಸಾಯನಿಕ ಕಾರಕಗಳಿಂದ ಉಂಟಾಗುತ್ತದೆ. ಸಾಧಾರಣವಾಗಿ ಮರಳುನಿಕ್ಷೇಪಗಳಲ್ಲಿ ಜೇಡು ಮತ್ತು ಮಡ್ಡಿ ಅಲ್ಪ ಪ್ರಮಾಣದಲ್ಲಿ ಬೆರೆತಿರುತ್ತವೆ. ಕೆಲವು ವೇಳೆ ಸಣ್ಣ ಮತ್ತು ದಪ್ಪನೆಯ ಕಲ್ಲು ಚೂರುಗಳೂ ಸೇರಿವುದುಂಟು. ಮರಳು ಸಾಗರತಳಗಳಲ್ಲಿ ಇರುವುದಕ್ಕಿಂತಲೂ ಭೂಖಂಡಗಳಲ್ಲೇ ಹೆಚ್ಚಾಗಿ ವ್ಯಾಪಿಸಿದೆ. ಭೂಮಿಯೊಳಗೆ ಮಣ್ಣಿನ ಪದರಗಳ ಮಧ್ಯೆ ಮರಳಿನ ಪೊರೆಗಳಿದ್ದರೆ ಆಭಾಗ ಉತ್ತಮ ಜಲವಾಹಕವಾಗಿ ಅಲ್ಲಿ ಹೆಚ್ಚಿನ ಅಂತರ್ಜಲ ಶೇಖರಣೆಗೊಂಡಿರುತ್ತದೆ. ಮರಳಿನಲ್ಲಿ ಬೆಣಚುಕಲ್ಲಿನ ಕಣಗಳು ಬಲು ಪ್ರಾಮುಖ್ಯವಾದ್ದರಿಂದ ಮರಳು ಎಂದರೆ ಬೆಣಚು ಕಣಗಳ ಸಮೂಹ ಎಂದು ಹೇಳುವುದೇ ರೂಢಿ ಆಗಿದೆ.

ಮರಳು ರೂಪುತಳೆವ ಬಗೆ: ಪ್ರಕೃತಿಯಲ್ಲಿ ಶಿಲೆಗಳು ಶಿಥಿಲೀಕರಣ ಮತ್ತು ಸವೆತಕ್ಕೆ ಒಳಗಾಗುವುದರಿಂದ ಮರಳು ಉಂಟಾಗುತ್ತದೆ. ನದಿ, ತೊರೆ, ಕಡಲಿನ ಮತ್ತು ಸರೋವರದ ಅಲೆ ಮತ್ತು ಪ್ರವಾಹಗಳು ಶಿಲೆಗಳನ್ನು ಸವೆಸಿ ಮರಳು ರೂಪುಗೊಳ್ಳುವುದರಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಹಿಮನದಿಗಳು ಹರಿಯುವಾಗ ಶಿಲೆಗಳನ್ನು ಕೊರೆಯುವುದರಿಂದಲೂ ಮರಳು ಉಂಟಾಗುವುದುಂಟು. ಗಾಳಿ ಕೂಡ ಹಲವು ಶಿಲೆಗಳನ್ನು ಸವೆಸಿ ಮರಳನ್ನು ಕ್ರೋಢಿಕರಿಸುತ್ತದೆ. ಮರಳು ಶಿಲೆಗಳ ಶಿಥಿಲೀಕರಣದಿಂದ ಕೆಲವು ಮರಳುನಿಕ್ಷೇಪಗಳು ಅವು ಇದ್ದ ಸ್ಥಳದಲ್ಲೆ ರೂಪುಗೊಳ್ಳುತ್ತವೆ. ಆದರೆ ಮರಳುನಿಕ್ಷೇಪಗಳು ಹೆಚ್ಚಾಗಿ ಹರಿವ ನದಿ ಮತ್ತು ತೊರೆಗಳಿಂದಲೊ ಕಡಲ ಮತ್ತು ಸರೋವರಗಳ ಅಲೆಗಳು ಮತ್ತು ಪ್ರವಾಹದಿಂದಲೊ ವಿಂಗಡಿಸಲ್ಪಟ್ಟ ಕಣಗಳ ಒಟ್ಟುಗೂಡುವಿಕೆಯಿಂದ ಉಂಟಾಗುತ್ತವೆ. ಹೀಗೆ ವಿವಿಧ ರೀತಿಯಲ್ಲಿ ಸಂಗ್ರಹಗೊಂಡ ಮರಳುನಿಕ್ಷೇಪಗಳು ವಿವಿಧ ಆಕಾರ ತಾಳುತ್ತವೆ. ನದಿ ಮತ್ತು ತೊರೆಗಳಿಂದಾದ ನಿಕ್ಷೇಪಗಳು ದಂಡೆಗಳಂತೆಯೂ ನದಿ ಮುಖಜಭೂಮಿಯಲ್ಲಿಯ ನಿಕ್ಷೇಪಗಳು ಅತಿ ವಿಸ್ತಾರವಾಗಿ ಹರಡಿದಂತೆಯೂ ಕಡಲ ಮತ್ತು ಸರೋವರ ತೀರಗಳಲ್ಲಿಯ ನಿಕ್ಷೇಪಗಳು ದೊಡ್ಡ ದಂಡೆಗಳಂತೆಯೂ ಗಾಳಿಯ ಹೊಡೆತದಿಂದ ಉಂಟಾದವು ದಿಬ್ಬಗಳಂತೆಯೂ ಇರುತ್ತವೆ. ಮರಳನ್ನು ಅದು ದೊರೆವ ಪ್ರದೇಶವನ್ನು ಆಧರಿಸಿ ನದಿ ಮರಳು, ಸರೋವರದ ಮರಳು, ಕಡಲತೀರದ ಮರಳು, ದಿಬ್ಬದ ಮರಳು ಎಂದು ಮುಂತಾಗಿ ವರ್ಗೀಕರಿಸುವುದಿದೆ. 

	ಮರಳನ್ನು ಕುರಿತಾದ ವೈಜ್ಞಾನಿಕ ಶೋಧನೆ ಎರಡು ಶತಮಾನಗಳಿಗಿಂತಲೂ ಹಿಂದಿನದು. ಮೊತ್ತಮೊದಲಿಗೆ ನದಿ ಮತ್ತು ಕಡಲತೀರಗಳಲ್ಲಿ ಮರಳ ಶೋಧನೆ ಬಹುಶಃ ಮೆಕ್ಕಲು ಚಿನ್ನಸಿಗುವುದೆಂಬ ಆಶಾಭಾವನೆಯಿಂದ ಪ್ರಾರಂಭಗೊಂಡಿತು. ವಿಶಿಷ್ಟ ರೀತಿಯ ಸೂಕ್ಷ್ಮದರ್ಶಕವನ್ನು ಈ ಸಂಶೋಧನೆಯಲ್ಲಿ ಬಳಸಲಾಯಿತು ಇದರಿಂದ ಮರಳು ನಿಕ್ಷೇಪಗಳು ಉಂಟಾದ ರೀತಿ ಹಾಗೂ ಅವುಗಳ ಹಿನ್ನೆಲೆಗಳ ಬಗೆಗಿನ ವಿಶ್ಲೇಷಣೆ ಸಾಧ್ಯವೆನಿಸಿತು.

	ಮರಳಿನ ಖನಿಜಗಳ ನಿರೂಪಣೆಯನ್ನು ಅದರಲ್ಲಿ ದೊರೆಯುವ ಅಲ್ಪ ಪ್ರಮಾಣದ ಆದರೆ ಅತ್ಯಂತ ಮಹತ್ತ್ವವುಳ್ಳ, 2.6ಕ್ಕೂ ಹೆಚ್ಚಿನ ಸಾಪೇಕ್ಷ ಸಾಂದ್ರತೆಯುಳ್ಳ ಭಾರಖನಿಜಗಳನ್ನು (ಹೆವಿ ಮಿನರಲ್ಸೆ) ಅಭ್ಯಸಿಸುವುದರ ಮೂಲಕ ನಿರ್ದೇಶಿಸುವುದಿದೆ. ಭಾರ ಖನಿಜಗಳ ಉಪಯುಕ್ತತೆ ವಿಶೇಷವಾಗಿ ಸ್ತರಗಳ ಹೊಂದಾಣಿಕೆಯನ್ನು ಕುರಿತ ಅಧ್ಯಯನ ಹಾಗೂ ಅನಿಲ ಮತ್ತು ತೈಲ ನಿಕ್ಷೇಪಗಳ ಶೋಧನೆಗಳನ್ನು ಕುರಿತು ಇರುವುದರಿಂದ ಮರಳಿನ ಬಗೆಗಿನ ಸಂಶೋಧನೆಯೂ ಹೆಚ್ಚು ಪ್ರಗತಿಗೊಂಡಿದೆ. ಇದರಿಂದ ಉದ್ಭವಗೂಂಡ ಮರಳ ಖನಿಜವಿಜ್ಞಾನ ಅನಾದಿಕಾಲದ ಮತ್ತು ಇತ್ತೀಚಿನ ಮರಳು ನಿಕ್ಷೇಪಗಳ ಮೂಲ ಶಿಲಾಸಮೂಹಗಳ ಪ್ರದೇಶವನ್ನು ಪತ್ತೆ ಹಚ್ಚುವಲ್ಲಿ, ಅಂದಿನ ವಾಯುಗುಣದ ಪ್ರಾಮುಖ್ಯವನ್ನು ಸ್ಥಿರಪಡಿಸುವಲ್ಲಿ ಹಾಗೂ ಪ್ರಕೃತಿಯಲ್ಲಿ ಮರಳು ನಿಕ್ಷೇಪ ರೂಪುಗೊಂಡಿರುವ ರೀತಿಯನ್ನು ಪ್ರತಿಪಾದಿಸುವಲ್ಲಿ ಬಲು ಸಹಾಯಕವಾಗಿದೆ. 

	ಖನಿಜ ವೈಜ್ಞಾನಿಕ ವೃತ್ತಾಂತ: ಮರಳಿನಲ್ಲಿ ಅತಿಮುಖ್ಯವಾದ ಖನಿಜಾಂಶ ಎಂದರೆ ಬೆಣಚು ಶಿಲಾಕಣಗಳು. ಇವುಗಳ ಜೊತೆಯಲ್ಲಿ ಪ್ರದೇಶದ ಲಕ್ಷಣಕ್ಕೆ ಅನುಗುಣವಾಗಿ ಇತರ ಖನಿಜಗಳು ಮತ್ತು ಪದಾರ್ಥಗಳು ಬೆರೆತಿರುತ್ತವೆ.  ಉದಾಹರಣೆಗೆ ಹವಳದ ಮರಳು, ಜಿಪ್ಸಮ್ ಮರಳು ಕಪ್ಪುಮರಳು ಇತ್ಯಾದಿ. ಸಾಮಾನ್ಯವಾಗಿ ಮರಳಿನಲ್ಲಿ ಬೆಣಚುಕಣಗಳ ಜೊತೆಯಲ್ಲಿ ವಿವಿಧ ರೀತಿಯ ಫೆಲ್ಡ್ಸ್‍ಪಾರ್ ಖನಿಜಗಳು ಅಲ್ಪ ಪ್ರಮಾಣದಲ್ಲೂ ಇತರ ನಾನಾ ವಿಧದ ಖನಿಜಗಳು ಅತ್ಯಲ್ಪ ಪ್ರಮಾಣದಲ್ಲೂ ಮಿಶ್ರಣಗೊಂಡಿರುತ್ತವೆ. ಇವು ಮರಳು ರೂಪುತಳೆದ ಮೂಲ ಶಿಲಾಸಮೂಹಗಳ ಖನಿಜಸಂಯೋಜನೆಗಳನ್ನು ತಿಳಿಸಲು ಬಲು ಉಪಯುಕ್ತ. 

	ಮರಳಿನ ಖನಿಜಸಂಯೋಜನೆಯ ಅಧ್ಯಯನದಲ್ಲಿ ಕಣಗಳ ಗಾತ್ರ, ವ್ಯಾಸ, ಆಕಾರ, ಗುಂಡಗಿರುವಿಕೆ ಮುಂತಾದವುಗಳ ವಿಶ್ಲೇಷಣೆ ಬಲು ಮುಖ್ಯ. ಈ ದೀರ್ಘ ಅಭ್ಯಾಸದ ಫಲವಾಗಿ ಪರಿಮಾಣಾತ್ಮಕ ಅವಸಾದನ (ಕ್ವಾಂಟಿಟೇಟಿವ್ ಸೆಡಿಮೆಂಟೇಷನ್) ಎಂಬ ಹೊಸ ಪ್ರಕ್ರಮವೇ ರೂಪುಗೊಂಡಿವೆ. ಕೆಲವು ವೇಳೆ ಮರಳಿನ ಕಣಗಳು ಬಹುತೇಕವಾಗಿ ದುಂಡಾಗಿರದೆ ಕೋನಯುತವಾಗಿರುವುದೂ ಉಂಟು. ಕೈಗಾರಿಕೋದ್ಯಮದಲ್ಲಿ ಕೋನಯುತ ಮರಳಿಗೆ ಬಹಳ ಬೆಲೆ ಇದೆ. ಈ ಬಗೆಯ ಮರಳಿಗೆ ಚೂಪು ಮರಳು (ಷಾರ್ಪ್‍ಸ್ಯಾಂಡ್) ಎಂದು ಹೆಸರು. ಮರಳು ಕಣಗಳ ದುಂಡಗಿರುವಿಕೆಯ ಪ್ರಮಾಣ ಅವು ಎಷ್ಟರಮಟ್ಟಿಗೆ ಸವೆತಕ್ಕೆ ಒಳಗಾಗಿವೆ ಹಾಗೂ ಸ್ಥಳಾಂತರಿಸಲ್ಪಟ್ಟಿವೆ. ಎಂಬುದನ್ನು ವಿಶದಪಡಿಸುತ್ತದೆ. ಮರಳುನಿಕ್ಷೇಪಗಳ ಮೇಲೆ ನಡೆಸಿದ ವೈಜ್ಞಾನಿಕ ಸಂಶೋಧನೆಗಳಿಂದ ಮರಳುಶೇಖರಣೆ ಭೂಮಿಯಲ್ಲಿ ಅಂತರ್ಗತವಾಗಿ ಹರಿವ ಕಾಂತ ಮತ್ತು ಗುರುತ್ವಾಕರ್ಷಣ ಬಲಗಳ ಸೆಳೆತಗಳ ಫಲವಾಗಿ ಉಂಟಾದವೆಂದು ತಿಳಿದು ಬಂದಿದೆ. ಈ ಸಂಬಂಧದ ಅಧ್ಯಯನಕ್ಕೆ ಪ್ರಾಕ್ಟ್ರವಾಹ ವಿಶ್ಲೇಷಣೆ (ಪೇಲಿಯೊಕರೆಂಟ್ ಅನಾಲಿಸಿಸ್) ಎಂದು ಹೆಸರು.

	ಆರ್ಥಿಕ ಉಪಯೋಗ: ಮರಳು ಬಲು ಮುಖ್ಯವಾದ ಆರ್ಥಿಕ ಸಂಪತ್ತು. ಇದು ಕಾಂಕ್ರೀಟ್ ಮತ್ತು ಗಾರೆಯ ಪ್ರಮುಖ ಘಟಕ. ಮರಳು ಕಣಗಳು ಸಿಲಿಕಾಂಶದ ಮೂಲಸ್ಥಾನ. ಮರಳಿನಿಂದ ಸೋಡಿಯಮ್ ಸಿಲಿಕೇಟ್, ಸಿಲಿಕಾನ್ ಕಾರ್ಬೈಡ್, ಸಿಲಿಕಾ ಇಟ್ಟಿಗೆ ಮುಂತಾದವನ್ನು ತಯಾರಿಸುವುದಿದೆ. ಇಟ್ಟಿಗೆಗೆ ಬಳಸುವ ಮಣ್ಣಿನ ಸಂಕುಚತೆಯನ್ನು ಕಡಿಮೆ ಮಾಡಲು ಮರಳನ್ನು ಬೆರೆಸುತ್ತಾರೆ. ರಸ್ತೆ ದುರಸ್ತಿ ಕಾರ್ಯದಲ್ಲಿ ಇದನ್ನು ಟಾರಿನ ಜೊತೆ ಮಿಶ್ರ ಮಾಡಿ ಬಳಸುತ್ತಾರೆ. ಶೇಕಡಾ 95ರಿಂದ 99ರ ವರಗೆ ಸಿಲಿಕಾಂಶವುಳ್ಳ ಮರಳಿಗೆ ಕೈಗಾರಿಕಾ ಮರಳು ಎಂದು ಹೆಸರು. ಗಾಜಿನ ತಯಾರಿಕೆ, ಎರಕದ ಅಚ್ಚುಗಳ ತಯಾರಿಕೆ, ವಕ್ರೀಕರಣ ಸಾಧನದ ತಯಾರಿಕೆ, ಆ ಸಾಧನವನ್ನು ಶೋಧಿಸುವ, ಸಾಣೆ ಹಿಡಿವ ಮತ್ತು ಮೆರಗುಕೊಡುವ ಉಪಕರಣಗಳ ತಯಾರಿಕೆಯಲ್ಲಿ ಮರಳು ವಿಶೇಷವಾಗಿ ಬಳಕೆಯಾಗುವುದಿದೆ. 

	ಮರಳಿನಲ್ಲಿ ಅಪರೂಪದ ಖನಿಜಗಳು ಮತ್ತು ಮೂಲಧಾತುಗಳು ಅಡಗಿರುತ್ತವೆ. ಕೆಲವು ನಿಕ್ಷೇಪಗಳಲ್ಲಿ ಚಿನ್ನ ಇದ್ದರೆ ಕೆಲವು ನಿಕ್ಷೇಪಗಳಲ್ಲಿ ವಜ್ರಗಳು, ಪ್ಲಾಟಿನಮ್, ಯುರೇನಿಯಮ್, ಕೇರಳದ ಕಡಲತೀರದಲ್ಲಿಯ ಮರಳು ನಿಕ್ಷೇಪಗಳಲ್ಲಿ ವಿಕಿರಣಪಟು ಮೋನಜೈಟ್, ಜಿರ್ಕಾನ್, ರೂಟೈಲ್, ಇಲ್ಮನೈಟ್, ಮುಂತಾದ ಖನಿಜಗಳನ್ನು ಪರಮಾಣು ಖನಿಜ ವಿಭಾಗದವರು ಬೇರ್ಪಡಿಸಿ ಹೊರತೆಗೆಯುತ್ತಿದ್ದಾರೆ. ಮೆಕ್ಕಲುನಿಕ್ಷೇಪ ಪರಿಶೋಧನೆಯಲ್ಲಿ ಮರಳುಶೋಧನೆಯೇ ಒಂದು ಪ್ರತ್ಯೇಕ ಕಲೆಯಾಗಿ ಪರಿಣಮಿಸಿದೆ.
(ಎಂ.ಜೆ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ